1877-1945. ಬ್ರಿಟನ್ನಿನ ರಸಾಯನ ಮತ್ತು ಭೌತವಿಜ್ಞಾನಿ. ಪ್ರೌಢಶಾಲೆಯ ಕೊನೆಯ ಪರೀಕ್ಷೆಯಲ್ಲಿ ಇವನದೇ ಪ್ರಥಮಸ್ಥಾನ (1893). ಅಲ್ಲಿ ಕಲಿತದ್ದು ವಿಜ್ಞಾನ ಮತ್ತು ಗಣಿತ. ಮುಂದೆ ಮ್ಯಾಲ್ವರ್ನ್ ಕಾಲೇಜ್, ಬರ್ಮಿಂಗ್ಹ್ಯಾಮ್ ಮತ್ತು ಕೇಂಬ್ರಿಜ್ ವಿಶ್ವವಿದ್ಯಾನಿಲಯಗಳಲ್ಲಿ ಸಹಾಯಕ ಉಪಾಧ್ಯಾಯನಾಗಿ ಸೇರಿದ (1909). ಇವನಿಗೆ 1920ರಲ್ಲಿ ಕೇಂಬ್ರಿಜ್ನ ಟ್ರಿನಿಟಿ ಕಾಲೇಜಿನ ಫೆಲೋ ಪದವಿ ದೊರಕಿತು. ಒಂದೇ ರಾಸಾಯನಿಕ ಗುಣಗಳಿದ್ದರೂ ಬೇರೆ ಬೇರೆ ಪರಮಾಣುಗಳಿರುವ ಸಮಸ್ಥಾನಿಗಳನ್ನು (ಐಸೊಟೋಪ್ಸ್) ನಿಷ್ಕೃಷ್ಟವಾದ ರೀತಿಯಲ್ಲಿ ಕಂಡುಹಿಡಿಯಲು ಜಡತ್ವರೋಹಿತಲೇಖಕ (ಮಾಸ್ ಸ್ಪೆಕ್ಟ್ರೊಗ್ರಾಫ್) ಎಂಬ ಉಪಕರಣವನ್ನು ನಿರ್ಮಿಸಿದ. ಇದರ ಸಹಾಯದಿಂದ ಎಲ್ಲ ಮೂಲವಸ್ತುಗಳಿಗೂ ಸಮಸ್ಥಾನಿಗಳನ್ನು ಕಂಡುಹಿಡಿಯುವುದರಲ್ಲಿ ನಿರತನಾಗಿ ಪರಮಾಣು ಭಾರಗಳನ್ನು ಹತ್ತು ಸಾವಿರದಲ್ಲೊಂದಕ್ಕಿಂತ ಕಡಿಮೆ ಅನಿಶ್ಚಿತತ್ವವಿರುವಂತೆ ಬಲು ನಿಷ್ಕೃಷ್ಟವಾಗಿ ನಿರ್ಧರಿಸಿದ್ದಾನೆ. ಈ ಸಾಧನೆಗಾಗಿ ರಸಾಯನವಿಜ್ಞಾನ ವಿಭಾಗದ ನೊಬೆಲ್ ಪಾರಿತೋಷಕ ಇವನಿಗೆ ದೊರಕಿತು (1922). ಮೆಕೆನ್ಸಿ ಡೇವಿಡ್ಸನ್ ಪದಕ 1920ರಲ್ಲೂ ಹ್ಯೂಸ್ ಪದಕ 1922ರಲ್ಲೂ ರಾಯಲ್ ಪದಕ 1938ರಲ್ಲೂ ದೊರೆತುವಲ್ಲದೆ ಇನ್ನೂ ಅನೇಕ ಪದಕಗಳೂ ಎಫ್.ಆರ್.ಎಸ್. ಎಂಬ ಗೌರವವೂ ಇವನಿಗೆ ಲಭಿಸಿದುವು. ಐಸೊಟೋಪ್ಸ್ ಎಂಬ ಪುಸ್ತಕವನ್ನು 1922ರಲ್ಲೂ ಮಾಸ್ ಸ್ಪೆಕ್ಟ್ರ ಅಂಡ್ ಐಸೊಟೋಪ್ಸ್ ಎಂಬ ಪುಸ್ತಕವನ್ನು 1933ರಲ್ಲೂ ಇವನು ಬರೆದು ಪ್ರಸಿದ್ಧಪಡಿಸಿದ. ಇವು ಜಡತ್ವರೋಹಿತದ ವಿಷಯದಲ್ಲಿ ಆದರ್ಶ ಪುಸ್ತಕಗಳಾಗಿವೆ.	

ಆಸ್ಟನ್ ಸುಪ್ರಸಿದ್ಧ ಬ್ರಿಟಿಷ್ ಭೌತವಿಜ್ಞಾನಿ ಜೆ.ಜೆ. ಥಾಮ್ಸನ್ನ ಸಹಾಯಕನಾಗಿ ಕೆಲಸಮಾಡಿ ಬೆಳಕಿಗೆ ಬಂದವ. ಕಾಂತಕ್ಷೇತ್ರಗಳಲ್ಲಿ ಧನವಿದ್ಯುದಂಶದಿಂದ ಕೂಡಿದ ಅಯಾನುಗಳ ವಿಚಲನವನ್ನು (ಡಿಫ್ಲೆಕ್ಷನ್ ಆಫ್ ಪಾಸಿಟಿವ್ಲಿ ಚಾಜ್ರ್ಡ್ ಅಯಾನ್ಸ್ ಇನ್ ಮ್ಯಾಗ್ನೆಟಿಕ್ ಫೀಲ್ಡ್ಸ್) ಕಂಡುಹಿಡಿಯಲು ಥಾಮ್ಸನ್ ನಿರ್ಮಿಸಿದ್ದ ಉಪಕರಣವನ್ನು ಇವನು ಸುಧಾರಿಸಿದ. ಇದರ ಪರಿಣಾಮವಾಗಿ ಒಂದು ನಿರ್ದಿಷ್ಟ ರಾಶಿಯ ಎಲ್ಲ ಅಯಾನುಗಳೂ ಫೋಟೋಗ್ರಾಫ್ ಫಿಲ್ಮಿನ ಒಂದು ಸೂಕ್ಷ್ಮರೇಖೆಯಲ್ಲಿ ಕೇಂದ್ರೀಕೃತವಾಗುವುದು ಸಾಧ್ಯವಾಯಿತು. ಪರಮಾಣುಗಳ ಭಾರವನ್ನು ನಿಷ್ಕೃಷ್ಟವಾಗಿ ನಿರ್ಣಯಿಸುವಲ್ಲಿ ಇದು ಮಹತ್ತ್ವದ ಸುಧಾರಣೆ. ಭವಿಷ್ಯದಲ್ಲಿ ಮನುಷ್ಯ ಪರಮಾಣು ಶಕ್ತಿಯನ್ನು ಪಡೆಯುವ ಸಾಹಸ ಸಾಧಿಸುತ್ತಾನೆ ಎಂದು ಆಸ್ಟನ್ ದೃಢವಾಗಿ ನಂಬಿದ್ದ. ಇಂಥ ಸನ್ನಿವೇಶದಲ್ಲಿ ಒದಗಬಹುದಾದ ಅಪಾಯಗಳನ್ನು ಕುರಿತು ಅವನು ತನ್ನ ನೊಬೆಲ್ ಬಹುಮಾನಸಂಬಂಧ ಭಾಷಣದಲ್ಲಿ ಪ್ರಸ್ತಾಪಿಸಿದ್ದಾನೆ. ಅಂದು ಇವನ ಮಾತನ್ನು ನಂಬಿದ ವಿಜ್ಞಾನಿಗಳಿಗಿಂತ ವೈಜ್ಞಾನಿಕ ಕಥೆಗಾರರ ಸಂಖ್ಯೆಯೇ ಹೆಚ್ಚು. ಇವನ ಜೀವನದ ಕೊನೆಯ ತಿಂಗಳುಗಳಲ್ಲಿ ಬಂದ ಹಿರೋಷೀಮಾದ ಪರಮಾಣು ಬಾಂಬ್ ಹತ್ಯಾಕಾಂಡದ ವರದಿ ಆಸ್ಟನ್ ಕನಸುಗಾರನಲ್ಲ ಎಂದು ಸಿದ್ಧಪಡಿಸಿತು.

ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ